ಆಚಾರ
ಈ ಪದಕ್ಕೆ ನಡತೆ, ಶಿಷ್ಟರೂ ಉತ್ತಮರೂ ಆಚರಿಸುವ ಪದ್ಧತಿ, ಪರಂಪರಾಗತವಾಗಿ ಒದಗಿಬಂದ ನಿಯಮಿತ ನಿತ್ಯಕರ್ಮಗಳು, ಸಂಪ್ರದಾಯ, ಪದ್ಧತಿ, ವಾಡಿಕೆ, ವಿಧ್ಯುಕ್ತಕರ್ಮ-ಈ ಅರ್ಥಗಳಿವೆ.

ಸಾಮಾನ್ಯ ಬಳಕೆಯಲ್ಲಿರುವ, ಇದರ ಪಾರಿಭಾಷಿಕ ಅರ್ಥ-ವಾದ, ನಿಯಮಿತ ನಿತ್ಯಕರ್ಮಗಳು ಎಂಬ ವಿವರಣೆಗನುಸಾರವಾಗಿ ಹಿಂದೂಧರ್ಮಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನಿಲ್ಲಿ ಪ್ರಸ್ತಾಪಿಸಲಾಗಿದೆ.

ಒಬ್ಬ ವ್ಯಕ್ತಿ ನಂಬುವ ತತ್ತ್ವ, ಸಿದ್ಧಾಂತ, ಮತ ಏನೇ ಇರಲಿ, ಅವನ ಆಚರಣೆ, ಅನುಷ್ಠಾನ, ನಿತ್ಯಜೀವನದಲ್ಲಿ ತನ್ನ ಕೆಲಸಕಾರ್ಯಗಳ ರೀತಿ-ಇವು ಬಹಳ ಮುಖ್ಯ. ಇಂಥ ಆಚರಣೆಯಿಂದಲೇ ಆತ ಧರ್ಮವನ್ನು ರಕ್ಷಿಸಿದಂತೆ ಆಗುವುದು, ಧರ್ಮವನ್ನು ರಕ್ಷಿಸುವವನನ್ನು ಧರ್ಮರಕ್ಷಿಸುವುದೆಂದೂ ಹೇಳಲಾಗಿದೆ (ಧರ್ಮೋ ರಕ್ಷತಿ ರಕ್ಷಿತಃ).

ಆಚಾರ ಇಷ್ಟು ಮುಖ್ಯವಾದುದರಿಂದ ಭಾರತದಲ್ಲಿ ಅತಿ ಪ್ರಾಚೀನ ಕಾಲದಲ್ಲೇ ಇದನ್ನು ನಿಯಮಿಸುವ ಧರ್ಮಶಾಸ್ತ್ರಗಳು ಜನ್ಮತಾಳಿದುವು. ಇವುಗಳನ್ನು ಸ್ಮøತಿಗಳ ಗುಂಪಿಗೆ ಸೇರಿಸಲಾಯಿತು. ಸ್ಮøತಿಗಳೆಂದರೆ ಮಾನವನ ಸ್ಮøತಿಗೆ (ನೆನಪಿಗೆ) ಗೋಚರವಾಗುವ ಪರಂಪರಾನುಗತವಾದ ಕಾರ್ಯಪದ್ಧತಿಗಳನ್ನು ವಿಶದೀಕರಿಸುವ ಗ್ರಂಥಗಳು.

ಈ ಧರ್ಮಶಾಸ್ತ್ರಗಳೂ, ಅವುಗಳ ಬಗೆಗೆ ವ್ಯಾಖ್ಯಾನಗಳೂ, ವಿವರಣೆಗಳೂ ಕ್ರಿ.ಪೂ. ನಾಲ್ಕನೆಯ ಶತಮಾನದಿಂದ ಇತ್ತೀಚಿನವರೆಗೂ ರಚಿತವಾಗುತ್ತ ಬಂದಿವೆ. ಪಿ. ವಿ. ಕಾಣೆ ತಮ್ಮ ಆರು ಸಂಪುಟಗಳುಳ್ಳ ಧರ್ಮಶಾಸ್ತ್ರ ಎಂಬ ಬೃಹದ್ಗ್ರಂಥದಲ್ಲಿ ಈ ವಿಪುಲವಾದ ಶಾಸ್ತ್ರಭಂಡಾರವನ್ನು ಕುರಿತು ಬರೆದಿದ್ದಾರೆ. ಮುಖ್ಯವಾದ ಸುಮಾರು ನೂರು ಗ್ರಂಥಗಳ ಸ್ಥೂಲ ಪರಿಚಯ ಮಾಡಿಕೊಟ್ಟಿದ್ದಾರೆ. ಇವುಗಳಲ್ಲಿ ಪುರಾತನಕಾಲಕ್ಕೆ ಸೇರಿದ ಗೌತಮ, ಬೌಧಾಯನ, ಆಪಸ್ತಂಭ, ವಸಿಷ್ಠ, ವಿಷ್ಣು, ಹಾರೀತ, ಮನು, ಯಾಜ್ಞವಲ್ಕ್ಯ, ಪರಾಶರ, ಬೃಹಸ್ಪತಿ, ಕಾತ್ಯಾಯನ, ಆಂಗೀರಸ ಈ ಹೆಸರುಗಳನ್ನು ತಾಳಿದುವು ಉಲ್ಲೇಖನೀಯವಾಗಿವೆ. ಇವೇ ಅಲ್ಲದೆ ರಾಮಾಯಣ ಮಹಾಭಾರತಗಳಲ್ಲೂ ಕೆಲವು ಪುರಾಣಗಳಲ್ಲೂ ನಿದರ್ಶನಪೂರ್ವಕವಾಗಿ ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳ ಪ್ರಸ್ತಾಪ ಬಂದಿದೆ.

ಮಧ್ಯಕಾಲದಲ್ಲಿದ್ದ ದಾಕ್ಷಿಣಾತ್ಯ ಸ್ಮøತಿಕಾರರಲ್ಲಿ 13ನೆಯ ಶತಮಾನದಲ್ಲಿ ಯಾದವ ರಾಜ್ಯದಲ್ಲಿದ್ದ ಹೇಮಾದ್ರಿಯೂ 14ನೆಯ ಶತಮಾನದಲ್ಲಿದ್ದ ವಿದ್ಯಾರಣ್ಯರೂ ಪ್ರಮುಖರು.

ಧರ್ಮವನ್ನಾಚರಿಸುವವರಿಗೆ ನಾಲ್ಕು ಪ್ರಮಾಣಗಳೆಂದು ಯಾಜ್ಞವಲ್ಕ್ಯಸ್ಮøತಿಯಲ್ಲಿ ಹೇಳಿದೆ; ಶ್ರುತಿ (ವೇದ), ಸ್ಮøತಿ, ಸದಾಚಾರಸಂಪನ್ನರಾದವರ ನಡತೆ, ತಮ್ಮ ಅಂತರಾತ್ಮನಿಗೆ ಪ್ರಿಯವಾಗಿರುವ ಮಾರ್ಗ.
ಧರ್ಮಾಚರಣೆಯನ್ನು ಸ್ಥೂಲವಾಗಿ ಮೂರು ಭಾಗಗಳಾಗಿ ವಿಂಗಡಿಸಿ ವಿವರಿಸಿದ್ದಾರೆ: ಆಚಾರ, ವ್ಯವಹಾರ ಮತ್ತು ಪ್ರಾಯಶ್ಚಿತ್ತ.
ಆಚಾರದ ನಿರೂಪಣೆಯಲ್ಲಿ ಸಾಮಾನ್ಯವಾಗಿ ಈ ವಿಷಯಗಳು ಬರುತ್ತವೆ; ಸಂಸ್ಕಾರಗಳು, ಶುದ್ಧೀಕರಣಕರ್ಮಗಳು. ನಾಲ್ಕು ವರ್ಣಗಳವರು (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ) ಮತ್ತು ಸಂಕೀರ್ಣಜಾತಿಯವರು ಅನುಸರಿಸಬೇಕಾದ ಕರ್ಮಗಳು. ನಾಲ್ಕು ಆಶ್ರಮಗಳ ಧರ್ಮಗಳು (ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸಿ) ಅನುಷ್ಠಾನಮಾಡಬೇಕಾದ ಕರ್ಮಗಳು; ವಿವಾಹ, ಸ್ತ್ರೀಯರ ಧರ್ಮ, ಆಹಾರನಿಯಮ, ಪಂಚಮಹಾಯಜ್ಞಗಳು (ಬ್ರಹ್ಮ, ದೇವ, ಪಿತೃ, ಮಾನವ ಮತ್ತು ಭೂತ)-ಇವುಗಳ ತೃಪ್ತಿಗೆ ಆಚರಿಸಬೇಕಾದ ಕಾರ್ಯಗಳು, ವ್ರತಗಳು ಮತ್ತು ತೀರ್ಥಕ್ಷೇತ್ರಗಳ ಸಂದರ್ಶನ.

ಕೆಲವು ಸ್ಮøತಿಗಳಲ್ಲಿ ಈ ಪ್ರಕರಣಕ್ಕೆ ಆಹ್ನಿಕ ಮತ್ತು ಆಚಾರ ಎಂಬ ಹೆಸರಿದೆ. ಆಹ್ನಿಕವೆಂದರೆ ದೈನಂದಿನ ಕರ್ಮ. ಈ ಪ್ರಕರಣದಲ್ಲಿ ಸಾಮಾನ್ಯವಾಗಿ ನಾಲ್ಕು ಆಶ್ರಮದವರು ಅನುಸರಿಸಬೇಕಾದ ನಿತ್ಯಕರ್ಮಗಳ ವಿವರಣೆ ಇದೆ ಹಾಗೂ ಗೃಹಸ್ಥಾಶ್ರಮವೇ ಎಲ್ಲ ಆಶ್ರಮಗಳಲ್ಲೂ ಶ್ರೇಷ್ಠವೆಂಬ ಹೆಗ್ಗಳಿಕೆಯೂ ಇದೆ. ಏಕೆಂದರೆ ಉಳಿದ ಮೂರು ಆಶ್ರಮಸ್ಥರಿಗೂ ಗೃಹಸ್ಥರೇ ಆಶ್ರಯದಾತರು. ಸಮಾಜಜೀವನದ ಭದ್ರತೆಗೂ ಸ್ವಾಸ್ಥ್ಯಕ್ಕೂ ಅವರೇ ಕಾರಣರಾಗಿರುತ್ತಾರೆ. ಈಗಿನ ಕಾಲದಲ್ಲಿ ವಾನಪ್ರಸ್ಥಾಶ್ರಮ ಪದ್ಧತಿ ಇಲ್ಲವೆಂದೇ ಹೇಳಬೇಕು. ಕೆಲವರು ಸಂನ್ಯಾಸಿಗಳಾಗುತ್ತಾರೆ. ಒಟ್ಟಿನಲ್ಲಿ ಇವರ ಸಂಖ್ಯೆ ಗಣನೀಯವಾಗಿಲ್ಲ. ಬ್ರಹ್ಮಚರ್ಯಾಶ್ರಮದ ವಿಷಯದಲ್ಲೂ ಈ ಮಾತು ಸಲ್ಲುತ್ತದೆ. ಹಿಂದಿನಕಾಲದಲ್ಲಿ ಗುರುಕುಲಗಳಿದ್ದಾಗ ಉಪನಯನ ವಿದ್ಯಾರಂಭದ ದೆಸೆಯಾಗಿತ್ತು. ವಿದ್ಯಮಾನಗಳು ಈಗ ತೀರ ಬದಲಾಯಿಸಿರುವುದರಿಂದ ಸ್ಮøತಿಕಾರರು ಹೇಳುವ ನಿಯಮಗಳು ಈಗ ಅನ್ವಯವಾಗುವುದಿಲ್ಲ. ಈ ಆಹ್ನಿಕ, ಆಚಾರ ವಿಧಿನಿಷೇಧಗಳ ಇಷ್ಟು ವಿವರವಾದ ಪ್ರತಿಪಾದನೆಯ ಹಿನ್ನೆಲೆಯಲ್ಲಿ ಎರಡು ಕಲ್ಪನೆಗಳು ಅಡಕವಾಗಿವೆ. 1 ಲೋಕದಲ್ಲಿ ಜನ್ಮವೆತ್ತಿದ ಮೇಲೆ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನೂ ಮಾನವ ಸಾಧಿಸಬೇಕು. ಧರ್ಮವೇ ಮೊದಲ ಪುರುಷಾರ್ಥ. ಮೋಕ್ಷವೇ ಅಂತಿಮ ಪುರುಷಾರ್ಥ. ಅರ್ಥ, ಕಾಮಗಳ ಚಟುವಟಿಕೆಗಳು ಧರ್ಮ ಮೋಕ್ಷಗಳಿಗೆ ಅಡ್ಡಿಯಾಗಬಾರದು. ವಿಧಿವತ್ತಾಗಿ ಮಂತ್ರಸಹಿತವಾಗಿ ಆಚರಿಸುವ ಎಲ್ಲ ಸಂಸ್ಕಾರಗಳ ಹಾಗೂ ಇತರ ಕರ್ಮಗಳ ಸಂದರ್ಭದಲ್ಲಿ ಚತುರ್ವಿಧ ಪುರುಷಾರ್ಥಸಿದ್ಧಿಯ ಉದ್ದೇಶವನ್ನು ಉಚ್ಚರಿಸುತ್ತಾರೆ. 2 ಮಾನವಜನ್ಮ ಸುಕೃತದಿಂದ ಲಭ್ಯವಾದುದು. ದೇಹ ಪವಿತ್ರವಾದ ಕೊಡುಗೆ. ಇದನ್ನು ಶುಚಿಯಾಗಿಯೂ ದೋಷರಹಿತವಾಗಿಯೂ ಕಾಪಾಡಿ ಭಗವಂತನ ಸೇವೆಗೂ ಅಂತರ್ಯಾಮಿಯಾಗಿರುವುದರಿಂದ, ಅವನ ಆವಾಸಕ್ಕೂ ಯೋಗ್ಯವನ್ನಾಗಿ ಮಾಡಬೇಕು. ಈ ಆಚಾರಗಳು ಬಹುಮಟ್ಟಿಗೆ ಆರೋಗ್ಯರಕ್ಷಣೆಗೂ ಮತ್ತು ಸಾತ್ತ್ವಿಕಜೀವನ ನಡೆಸುವುದಕ್ಕೂ ಅನುವಾಗುತ್ತವೆಂಬುದು ಗಮನಾರ್ಹವಾದ ವಿಷಯ. ಆಚಾರಗಳನ್ನು ಪಾಲಿಸುವುದರಿಂದ ಆಯುಸ್ಸು, ತೇಜ, ಧನವೃದ್ಧಿಯಾಗುತ್ತವೆಂದು ಹೇಳುವ ಮನುಸ್ಮøತಿಯ ವಾಕ್ಯ ಇದಕ್ಕೆ ಸಾಕ್ಷಿಯಾಗಿದೆ:

ಆಚಾರಾಲ್ಲಭತೇಹ್ಯಾಯುರಾಚಾದ್ಧಿರಾಪ್ತಿತಾಃ ಪ್ರಜಾಃ
ಆಚಾರಾದ್ಧನಮಕ್ಷಯ್ಯಾಮಾಚಾರೋಹಂತ್ಯಲಕ್ಷಣಂ (ಮನು IV-156).
ಸೂರ್ಯೋದಯಕ್ಕೆ ಪೂರ್ವದಲ್ಲಿಯೇ ಬ್ರಾಹ್ಮಿಮುಹೂರ್ತದಲ್ಲಿ ಏಳುವುದು, ಪ್ರಾತಃಕಾಲದಲ್ಲಿ ಭಗವಂತನ, ಚಿರಂಜೀವಿಗಳ, ಪಂಚಕನ್ಯೆಯರ ಸ್ಮರಣೆ, ಸ್ತೋತ್ರಾದಿಗಳನ್ನು ಹೇಳುವುದು, ಮಲಮೂತ್ರವಿಸರ್ಜನ, ಮೃತ್ತಿಕಾಶೌಚ, ವಂದನೆ, ಅಗ್ನಿಹೋತ್ರ, ದೇವರಪೂಜೆ, ಭೋಜನ ಇತ್ಯಾದಿಗಳನ್ನು ವಿಸ್ತಾರವಾಗಿ ಅನೇಕ ವಿವರಣೆಗಳೊಂದಿಗೆ ಪ್ರಸ್ತಾಪ ಮಾಡಲಾಗಿದೆ. ಕಾಲಕ್ರಮದಲ್ಲಿ ಅನೇಕ ಆಚಾರಗಳು ರೂಢಿ ತಪ್ಪಿ ಲುಪ್ತವಾಗಿವೆ. ಆದರೆ ನಿತ್ಯಸ್ನಾನ, ಮತಾನುಸಾರ ನಾಮ, ವಿಭೂತಿ ಇತ್ಯಾದಿಗಳ ಧಾರಣೆ, ಆಹಾರನಿಯಮಗಳು ಬಹುಮಟ್ಟಿಗೆ ಸಂಪ್ರದಾಯವಾಗಿ ಉಳಿದುಕೊಂಡು ಹಿಂದುಗಳ ಶುಚಿತ್ವಕ್ಕೂ ಸಾತ್ವಿಕ ಸ್ವಭಾವಕ್ಕೂ ಕಾರಣವಾಗಿವೆ.

ನಮ್ಮ ಸಮಾಜ ನಾಲ್ಕು ವರ್ಣಗಳಲ್ಲಿ ವಿಭಾಜಿತವಾದದ್ದು. ಈ ವ್ಯವಸ್ಥೆಯ ಬುನಾದಿಯ ಮೇಲೆಯೇ ಧರ್ಮಶಾಸ್ತ್ರಗಳು ರಚಿತವಾಗಿವೆ. ಪ್ರತಿಯೊಂದು ವರ್ಣಕ್ಕೆ ಸೇರಿದವರ ಆಚಾರಗಳನ್ನೂ ವಿವರಿಸಲಾಗಿದೆ. ಈ ವರ್ಣಗಳ ಮುಖ್ಯ ಕಾರ್ಯಕ್ರಮಗಳು-ವಿದ್ಯೆ, ಆಡಳಿತ, ಆರ್ಥಿಕವ್ಯವಸ್ಥೆ ಮತ್ತು ಈ ಮೂರು ವರ್ಣಗಳವರ ಸೇವೆ-ಹೀಗಿತ್ತು. ಆಯಾ ವರ್ಣದವರು ಪಾಲಿಸಬೇಕಾದ ಕರ್ತವ್ಯಗಳನ್ನು ಕುರಿತು ಹೆಚ್ಚು ಪ್ರಸ್ತಾಪವಿದೆಯೇ ಹೊರತು ಅವರ ಹಕ್ಕು, ಅಧಿಕಾರಗಳ ವಿಷಯದಲ್ಲಿ ಸ್ಮøತಿಕಾರರು ಗಮನ ಹರಿಸಿಲ್ಲ. ಬಹುಮಟ್ಟಿಗೆ ಈ ಕರ್ಮಗಳು ಅನುವಂಶಿಕವಾಗಿದ್ದುವು. ತನ್ನ ವರ್ಣಧರ್ಮವನ್ನು ಪಾಲಿಸುವುದೇ ತನಗೆ ಶ್ರೇಯಸ್ಕರವೆಂಬ ಭಾವನೆ ಸಾಮಾನ್ಯವಾಗಿತ್ತು. ಆದುದರಿಂದ ಪ್ರತಿಯೊಬ್ಬರ ಗುರಿ ತಕ್ಕಮಟ್ಟಿಗೆ ನಿರ್ದಿಷ್ಟವಾಗಿಯೇ ಇತ್ತು. ವೃತ್ತಿಹೀನತೆ, ಸ್ಪರ್ಧೆ, ಅಸಹಕಾರ ಮನೋಭಾವ-ಇವಕ್ಕೆ ಅವಕಾಶವಿರಲಿಲ್ಲ. ಸಮಾಜ ಏಕದೇಹನ್ಯಾಯವನ್ನನುಸರಿಸಿ ಪರಸ್ಪರ ಅವಲಂಬನದಿಂದ ಬಾಳಬೇಕೆಂಬ ತತ್ತ್ವ ಇದರಲ್ಲೇ ಅಡಕವಾಗಿತ್ತು.

ಕೆಲವುವೇಳೆ, ವಿಶೇಷವಾಗಿ ಆಪತ್ಕಾಲದಲ್ಲಿ, ಒಂದು ವರ್ಣದವರು ಮತ್ತೊಂದು ವರ್ಣದವರ ಕೆಲಸಕಾರ್ಯಗಳನ್ನೂ ಮಾಡಲು ಅವಕಾಶವಿತ್ತು. ಮೊದಲ ಮೂರು ವರ್ಣದವರಿಗೆ ಹೆಚ್ಚಾಗಿ ವಿಧಿನಿಷೇಧಗಳಿದ್ದುವು. ಆದರೆ, ಎಲ್ಲ ವರ್ಣದವರಿಗೆ ಅನ್ವಯಿಸುವ ಸತ್ಯ, ಅಹಿಂಸೆ, ಆಸ್ತೇಯ ಮುಂತಾದುವನ್ನು ಶಾಸ್ತ್ರಕಾರರು ಉಲ್ಲೇಖಿಸಿದ್ದಾರೆ. ಉದಾಹರಣೆಗೆ, ಮನುಸ್ಮøತಿಯಲ್ಲಿ ಹೀಗೆ ಹೇಳಿದೆ:

ಇಂದ್ರಿಯಾಣಾಂ ನಿರೋಧೇನ ರಾಗದ್ವೇಷ ಕ್ಷಯೇಣ ಚ
ಅಹಿಂಸಯಾಚ ಭೂತಾನಾಮಮೃತತ್ವಾಯ ಕಲ್ಪತೇ 
(ಇಂದ್ರಿಯಗಳ ನಿರೋಧದಿಂದಲೂ ರಾಗದ್ವೇಷಗಳ ಕ್ಷಯದಿಂದಲೂ ಅಹಿಂಸೆಯಿಂದಲೂ ಜೀವಿಗಳಿಗೆ ಅಮೃತತ್ವ ಉಂಟಾಗುತ್ತದೆ.)

ಅಂತೆಯೇ ಮಹಾಭಾರತದ ಶಾಂತಿಪರ್ವದಲ್ಲಿ ಹೀಗಿದೆ:
ಅಕ್ರೋಧಃ ಸತ್ಯವಚನಂ ಸಂವಿಭಾಗಃ ಕ್ಷಮಾ ತಥಾ					 
ಪ್ರಜನಃ ಸರ್ವದಾರೇಷು ಶೌಚಮದ್ರೋಹ ಏವಚ
 	ಆರ್ಜವಂ ಭೃತ್ಯ ಭರಣಂ ನವೈತೆ ಸಾರ್ವವರ್ಣಿಕಾಃ
 (ಕೋಪವನ್ನು ಬಿಡುವುದು, ಸತ್ಯವನ್ನು ನುಡಿಯುವುದು, ನ್ಯಾಯವಾದ ಹಂಚಿಕೆ, ಕ್ಷಮೆ, ವ್ಯಭಿಚಾರ ಮಾಡದಿರುವುದು, ಶುಚಿತ್ವ, ದ್ರೋಹವನ್ನು ಮಾಡದಿರುವುದು, ನೇರವಾದ ನಡತೆ, ಭೃತ್ಯರನ್ನು ರಕ್ಷಿಸುವುದು-ಈ ಒಂಬತ್ತು ನಿಯಮಗಳನ್ನು ಎಲ್ಲ ವರ್ಣದವರೂ ಪಾಲಿಸಬೇಕು.)

 	ನಾಲ್ಕನೆಯ ವರ್ಣದವರಾದ ಶೂದ್ರರು ಉಳಿದ ಮೂರು ವರ್ಣದವರ ಅಧೀನದಲ್ಲೂ, ಆಶ್ರಯದಲ್ಲೂ ಇದ್ದರು. ವೇದಾಧ್ಯಯನ, ವೇದಮಂತ್ರಗಳ ಸಹಿತ ಮಾಡುವ ವೈದಿಕಕರ್ಮ-ಇವಕ್ಕೆ ಅವರಿಗೆ ಅಧಿಕಾರವಿರಲಿಲ್ಲ. ಆದರೂ ಮಹಾಭಾರತ, ರಾಮಾಯಣ, ಭಾಗವತಾದಿಪುರಾಣಗಳನ್ನು ಶ್ರವಣಮಾಡಿ ತತ್ತ್ವಗಳನ್ನರಿಯುವ ಅವಕಾಶ ಕಲ್ಪಿಸಲಾಗಿತ್ತು. ವಿಶೇಷವಾಗಿ ಪುರಾಣಗಳ ರಚನೆ ಮತ್ತು ಪ್ರಚಾರ ಇವರನ್ನುದ್ದೇಶಿಸಿಯೇ ಹೀಗೆ ಮಾಡಲಾಗಿತ್ತೆಂದು ಹೇಳಬಹುದು. ತಮ್ಮ ಸ್ವಕರ್ಮಗಳನ್ನು ಆಚರಿಸಿ ಸಿದ್ಧಿಯನ್ನು ಹೊಂದಬಹುದೆಂಬ ಆಶ್ವಾಸನೆಯನ್ನು ಗೀತೆಯಲ್ಲಿ ಕಾಣುತ್ತೇವೆ. ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿ ಲಭತೇನರಃ (ಮನುಷ್ಯರು ತಮ್ಮ ತಮ್ಮ ಕರ್ಮಗಳನ್ನು ಮಾಡಿ ಪೂರ್ಣಸಿದ್ಧಿಯನ್ನು ಹೊಂದುವರು). ಮಹಾಭಾರತದಲ್ಲಿನ ವಿದುರನೂ ಧರ್ಮವ್ಯಾಧನೂ ಹೀಗೆ ಸಿದ್ಧಿಯನ್ನು ಪಡೆದರು. ಪೂರ್ತಧರ್ಮ ಅಂದರೆ ಬಾವಿ, ಕೊಳ, ದೇವಸ್ಥಾನ, ಉದ್ಯಾನ ಇವುಗಳನ್ನು ನಿರ್ಮಿಸುವುದು, ಅನ್ನದಾನ ಮಾಡುವುದು ಇದಕ್ಕೆ ಶೂದ್ರನಿಗೆ ಅಧಿಕಾರವಿತ್ತು. ಪಂಚಮಹಾಯಜ್ಞಗಳನ್ನು (ವೇದಮಂತ್ರಗಳಿಲ್ಲದೆ) ಮಾಡುವ ಅಧಿಕಾರವೂ ಇತ್ತು. ಜಪ (ರಾಮನಾಮ, ಶಿವನಾಮ) ಮಾಡುವ ಅವಕಾಶವೂ ಇತ್ತು.
 
	ಶೂದ್ರರು ಕೀಳೆಂಬ ಭಾವನೆ ಬೆಳೆದು ಬಂದುದು ನಿಜ. ಇದು ಜಾತ್ಯಹಂಕಾರಗಳು ಬೆಳೆದುದರ ಫಲವಾಗಿದ್ದು ನಮ್ಮ ಸಮಾಜದ ಅವನತಿಯ ಕುರುಹಾಗಿದೆ. ಇಂಥ ಪರಿಸ್ಥಿತಿಯಲ್ಲೂ, ಬ್ರಾಹ್ಮಣವೃತ್ತಿಯನ್ನುಳಿದು ಎಲ್ಲ ವೃತ್ತಿಗಳನ್ನೂ ಅವಲಂಬಿಸಲು ಅವರಿಗೆ ಯಾವ ಅಡ್ಡಿಯೂ ಇರಲಿಲ್ಲ. ಕೆಲವರು ಯೋಧರಾದರು, ರಾಜ್ಯಗಳನ್ನೂ ಕಟ್ಟಿದರು. ಅನೇಕರು ಕೃಷಿ, ಗೋರಕ್ಷಣೆ, ವ್ಯಾಪಾರಗಳಲ್ಲಿ ತೊಡಗಿದರು. ವರ್ಣವ್ಯವಸ್ಥೆಯ ಕಟ್ಟುಗಳು ಕಾಲಕ್ರಮದಲ್ಲಿ ಸಡಿಲವಾಗುತ್ತ ಬಂದುವು.

ಕೆಲವು ಸಂಕೀರ್ಣಜಾತಿಯವರನ್ನು ಮುಟ್ಟಬಾರದೆಂಬ ಅಸ್ಪøಶ್ಯತೆಯ ಸಂಪ್ರದಾಯವೂ ಆಚಾರಕ್ಕೆ ಸಂಬಂಧಿಸಿದ್ದಾಗಿದೆ. ಇದಕ್ಕೆ ಸ್ಮøತಿಗಳ ಆಧಾರವಿಲ್ಲವೆಂದು ಕಾಣೆಯವರು ಪ್ರಮಾಣಸಹಿತ ನಿರೂಪಿಸಿದ್ದಾರೆ.-ಕೇವಲ ಸಂಪ್ರದಾಯವಾಗಿ ಬೆಳೆದು ಬಂದ ಒಂದು ಅಂಧ ಆಚರಣೆಯಾಗಿ ಅಸ್ಪøಶ್ಯತೆ ರೂಢಿಗೆ ಬಂತೆಂದು ತೋರುತ್ತದೆ. ಇದನ್ನು ಸಡಿಲಗೊಳಿಸಲು ಅನೇಕ ಸುಧಾರಕರು ಹಿಂದಿನ ಕಾಲದಿಂದಲೂ ಶ್ರಮಿಸಿದ್ದಾರೆ. ಮಧ್ಯಕಾಲದಲ್ಲಿ ಭಕ್ತಿಪಂಥಗಳ ಪ್ರವರ್ತಕರು ಈ ಜಾತ್ಯಹಂಭಾವವನ್ನು ನಿರ್ಮೂಲ ಮಾಡುವ ಪ್ರಯತ್ನ ಮಾಡಿದರು. ಈಚೆಗೆ ಮಹಾತ್ಮಾಗಾಂಧಿಯವರು ಇದರ ಬಗ್ಗೆ ಪ್ರಚಂಡವಾದ ಚಳುವಳಿ ಹೂಡಿದರು.

ಆಚಾರದಲ್ಲಿ ಸಂಸ್ಕಾರಗಳು ಸೇರುತ್ತವೆ. ಇವು ಜನ್ಮಾರಭ್ಯದಿಂದ ಮರಣಪರ್ಯಂತ ಅನುಷ್ಠಾನ ಮಾಡಬೇಕಾದ ವಿಶೇಷಕರ್ಮಗಳು. ಇವುಗಳ ವಿವರಗಳ ವಿಚಾರದಲ್ಲಿ ಸ್ಮøತಿಕಾರರಲ್ಲಿ ಏಕಮತವಿಲ್ಲದಿದ್ದರೂ ಸಾಮಾನ್ಯವಾಗಿ ಇವು ಷೋಡಶವೆಂದು ಪರಿಗಣಿಸಲ್ಪಟ್ಟಿವೆ. ಗರ್ಭಾದಾನ, ನಾಮಕರಣ, ಅನ್ನಪ್ರಾಶನ, ಕರ್ಣ ವೇಧ, ಉಪನಯನ, ವಿಹಾರ ಇತ್ಯಾದಿಯಾದ ಇವೆಲ್ಲವೂ ಮೊದಲ ಮೂರು ವರ್ಣದವರಿಗೆ ಅನ್ವಯಿಸುವುವು. ಕಾಲದೇಶವರ್ತಮಾನಗಳಿಗನುಸಾರವಾಗಿ ಇವುಗಳ ಆಚರಣೆಯಲ್ಲಿ ಭಿನ್ನತೆ ತಲೆದೋರಿತು. ಪ್ರಸ್ತುತ ಇವುಗಳಲ್ಲಿ ಕೆಲವು ಮಾತ್ರ ರೂಢಿಯಲ್ಲಿವೆ. 

ನಾಮಕರಣದ ವಿಷಯದಲ್ಲಿ ದೇವರ, ಗುರುಗಳ, ಅಜ್ಜನ ಹೆಸರಿಡುವುದು ಒಂದು ರೂಢಿ. ಕಿವಿ ಚುಚ್ಚುವುದೂ ಹಾಗೆಯೇ ಒಂದು ಪದ್ಧತಿ. ಉಪನಯನದ ವಿಷಯದಲ್ಲಿ ವಿದ್ಯಮಾನಗಳು ತೀರ ಬದಲಾಗಿವೆ. ವಿವಾಹದ ವಿಷಯದಲ್ಲೂ ದೇಶಾಚಾರಗಳೂ ಕುಲಾಚಾರಗಳೂ ಬೇರೆ ಬೇರೆಯಾಗಿ ವಿವಿಧ ಆಚರಣೆಗಳಿಗೆ ಎಡೆಕೊಟ್ಟಿವೆ. ಶಾಸ್ತ್ರವಿಧಿಗಳಿಗಿಂತ (ವೃದ್ಧ) ಸ್ತ್ರೀಯರ ಅಭೀಷ್ಟಗಳೂ ಆಚರಣೆಗಳೂ ಹೆಚ್ಚು ಪ್ರಾಶಸ್ತ್ಯ ಪಡೆದಿವೆ. ದೇಶಾಚಾರದ ಭಿನ್ನತೆಗೆ ಒಂದು ಉದಾಹರಣೆ: ದಕ್ಷಿಣದೇಶದಲ್ಲಿ ಸೋದರಮಾವ ಅಥವಾ ಸೋದರತ್ತೆಯ ಮಗನನ್ನೊ ಮಗಳನ್ನೊ ಮದುವೆ ಮಾಡಿಕೊಳ್ಳುವುದು ರೂಢಿಗೆ ಬಂದಿದೆ. ಅದೇ ರೀತಿ ಅಕ್ಕನ ಮಗಳನ್ನೂ ಮದುವೆಯಾಗುವ ಪದ್ಧತಿ ಇದೆ. ಸಪಿಂಡ ಸಂಬಂಧಗಳನ್ನೆಲ್ಲ ನಿಷೇಧಿಸಿರುವ ಸ್ಮøತಿಗಳಿಗೆ ಈ ಪದ್ಧತಿಗಳು ತೀರ ವಿರುದ್ಧವಾಗಿವೆ. ಕುಲಾಚಾರ, ದೇಶಾಚಾರಗಳೇ ಪ್ರಮಾಣವೆಂದು ಸ್ವೀಕರಿಸಲಾಗಿದೆ.

ಪಂಚಮಹಾಯಜ್ಞಗಳನ್ನು ವಿಧ್ಯುಕ್ತವಾಗಿಯೂ ಪ್ರಯತ್ನಪೂರ್ವಕವಾಗಿಯೂ ಆಚರಿಸುವವರು ಇಂದು ವಿರಳ. ಆದರೆ ಈ ಹಿಂದಿನ ಸಂಪ್ರದಾಯಗಳ ಬಲದಿಂದ ತಕ್ಕಮಟ್ಟಿಗೆ ದೈವಭಕ್ತಿಯೂ ಶ್ರಾದ್ಧಾದಿಗಳೂ ಅತಿಥಿಸತ್ಕಾರವೂ ನಮ್ಮ ಸಮಾಜದಲ್ಲಿ ವಿಶಿಷ್ಟಲಕ್ಷಣಗಳಾಗಿ ಉಳಿದಿವೆ. 

ವ್ರತಗಳ ಪಾಲನೆಯ ವಿಷಯದಲ್ಲೂ ಈ ಮಾತು ಅನ್ವಯಿಸುತ್ತದೆ. ಗಂಡಸರಿಗಿಂತಲೂ ಸ್ತ್ರೀಯರಲ್ಲಿ ಇವುಗಳ ಬಗೆಗೆ ಶ್ರದ್ಧೆ ತಕ್ಕಮಟ್ಟಿಗೆ ಉಳಿದಿದೆಯೆಂದು ಹೇಳಬಹುದು. ಆಚರಿಸದಿರುವವರಿಗೂ ಇದರ ಬಗೆಗೆ ಆದರ ಉಂಟು. ಈ ವಿಷಯವನ್ನು ಮನುಸ್ಮøತಿ ಪ್ರಸ್ತಾಪಿಸುತ್ತದೆ:

ಯದಿ ಸ್ತ್ರೀಯವರಜಃ ಶ್ರೇಯಃ ಕಿಂಚಿತ್ಸಮಾಚರೇತ್
ತತ್ಸರ್ವಮಾಚರೇದ್ಯುಕ್ತೋ ಯತ್ರವಾಸ್ಯ ರಮೇನ್ಮನಃ
 (ಸ್ತ್ರೀಯರೂ ಶ್ರೇಷ್ಠರಲ್ಲದವರೂ ಆಚರಿಸುವ ಉತ್ತಮ ಆಚರಣೆಗಳನ್ನು-ಅವುಗಳಿಂದ ಮನಸ್ಸಿಗೆ ಸಂತೋಷವಾದರೆ ಎಲ್ಲರೂ ಮೇಲ್ಪಂಕ್ತಿಯಾಗಿಟ್ಟುಕೊಂಡು ಆಚರಿಸಬೇಕು.)

ಸ್ತ್ರೀಧರ್ಮದ ವಿಷಯದಲ್ಲಿ ಸ್ಮøತಿಗಳು, ಪುರಾಣಗಳು ಬಹಳವಾಗಿ ಹೇಳುತ್ತವೆ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ (ಎಲ್ಲಿ ಸ್ತ್ರೀಯರು ಪೂಜ್ಯರಾಗಿದ್ದಾರೋ ಅಲ್ಲಿ ದೇವತೆಗಳು ಸಂತೋಷಗೊಳ್ಳುತ್ತಾರೆ-ಮನುಸ್ಮøತಿ) ಇವೇ ಮುಂತಾದ ಒಕ್ಕಣೆಗಳಿಂದ ಸ್ತ್ರೀಯರ ವಿಷಯದಲ್ಲಿದ್ದ ಆದರ ವ್ಯಕ್ತವಾಗುತ್ತದೆ.

ತೀರ್ಥಯಾತ್ರೆಗಳನ್ನು ಎಲ್ಲರಿಗೂ ನಿರ್ಬಂಧವಾಗಿ ವಿಧಿಸದಿದ್ದರೂ ಅವುಗಳಲ್ಲಿ ಸಾಮಾನ್ಯ ಜನರ ಆಸಕ್ತಿ ಇಂದಿನವರೆಗೂ ಉಳಿದುಕೊಂಡು ಬಂದಿದೆ.

ಕೆಲವು ಆಚಾರಗಳು ಹೆಸರಿಗೆ ಮಾತ್ರ ಉಳಿದಿದ್ದರೂ ಹಿಂದೂ ಸಮಾಜಕ್ಕೆ ಅವುಗಳಿಂದ ಬಹಳ ಉಪಕಾರವಾಗಿದೆ. ಶುಚಿತ್ವ, ಸಂಯಮ, ಸಂಘಟನೆ, ವಿಪ್ಲವಗಳ ಕಾಲದಲ್ಲೂ ಸಮಾಜ ನುಚ್ಚುನೂರಾಗದಂತೆ ಉಳಿದಿರುವುದು-ಇವಕ್ಕೆ ಆಚಾರಗಳು ತಕ್ಕಮಟ್ಟಿಗೆ ಕಾರಣ. ಅವುಗಳ ಅರ್ಥವಿಲ್ಲದ ಆಚರಣೆಯಿಂದಲೂ ನಿರ್ದಯೆಯ ಮನೋಧರ್ಮದಿಂದಲೂ ಕೇಡುಂಟಾಗಿದೆ. ಅವೇ ಸಮಗ್ರಧರ್ಮವೆಂಬ ಭ್ರಾಂತಿಯೂ ಉಂಟಾಗಿದೆ. ಈ ಕಾರಣಗಳಿಂದ ಆಧುನಿಕ ಕಾಲಕ್ಕೆ ಅನ್ವಯವಾಗುವ ಹೊಸ ಸ್ಮøತಿಗಳು ನಿರ್ಮಾಣವಾಗಬೇಕೆಂಬ ಸಲಹೆ ಕೆಲವು ವಿಚಾರಪರರಿಂದ ಕೇಳಿ ಬರುತ್ತಿದೆ. 					 
(ಎಸ್.ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ